ಈಡೆಂಟೇಟ  
ಸಸ್ತನಿವರ್ಗದ ಒಂದು ಗುಂಪು.  ಇದರಲ್ಲಿ ಸ್ಲಾತ್ ಇರುವೆ, ಭಕ್ಷಕ, ಆರ್ಮಡಿಲ್ಲೊ ಮತ್ತು ಆದಿಕಾಲದಲ್ಲಿದ್ದ ಕೆಲವು ಜೀವಿಗಳು ಸೇರಿವೆ.  ಈಡೆಂಟೇಟಗಳು ಜರಾಯುವುಳ್ಳ ಸಸ್ತನಿಗಳು.  ತಾಯಿಯ ಗರ್ಭಕೋಶದಲ್ಲಿ ಬೆಳೆಯುವ ಭವಿಷ್ಯಜೀವಿಗೂ ಗರ್ಭಕೋಶದ ಗೋಡೆಗೂ ಜರಾಯು ಸಂಬಂಧ ಕಲ್ಪಿಸಿದೆ.  ಇವುಗಳ ಉಗಮ ಪೂರ್ಣವಾಗಿ ಹೊಸ ಪ್ರಪಂಚಕ್ಕೆ ಮೀಸಲು.  ದಕ್ಷಿಣ ಅರ್ಜೆಂಟೀನ, ದಕ್ಷಿಣ ಅಮೆರಿಕ, ಮಧ್ಯ ಅಮೆರಿಕದಿಂದ ಹಿಡಿದು ದಕ್ಷಿಣ ಮೆಕ್ಸಿಕೊವರೆಗೆ ನೇರ ಪ್ರಸಾರವುಂಟು.  ಉತ್ತರ ಅಮೆರಿಕದ ಸಂಯುಕ್ತಸಂಸ್ಥಾನದ ದಕ್ಷಿಣ ಭಾಗದಲ್ಲಿ ಈ ಗುಂಪಿನ ಒಂದೇ ಒಂದು ಪ್ರಭೇದ ಮಾತ್ರವಿದೆ.  ಇದೇ 9 ಪಟ್ಟೆಯುಳ್ಳ ಆರ್ಮಡಿಲ್ಲೊ.

	ಈಡೆಂಟೇಟವೆಂದರೆ ಅದಂತಿ (ಹಲ್ಲುಗಳಿಲ್ಲದ್ದು) ಎಂದು ಅರ್ಥ.  ಆದರೆ ಈ ಜೀವಿಯನ್ನು ಪರಿಶೀಲಿಸಿದಾಗ ಈ ಹೆಸರು ಪೂರ್ಣ ಸತ್ಯವಲ್ಲ ಎಂದು ತಿಳಿಯುವುದು.  ಏಕೆಂದರೆ ಬಹಳ ಈಡೆಂಟೇಟ ಜೀವಿಗಳಿಗೆ ದವಡೆಹಲ್ಲುಗಳಿವೆ.  ಪೂರ್ಣವಾಗಿ ಇರುವೆಗಳನ್ನೇ ತಿಂದು ಬದುಕುವ ನಿಜವಾದ ಇರುವೆ ಭಕ್ಷಕಗಳಲ್ಲಿ ಮಾತ್ರ ಹಲ್ಲುಗಳಿಲ್ಲ.  ಸಾಮಾನ್ಯವಾಗಿ ಎಲ್ಲ ಈಡೆಂಟೇಟಗಳಲ್ಲೂ ದವಡೆಯ ಮುಂತುದಿಯ ಬಾಚಿ ಹಲ್ಲುಗಳು ಮತ್ತು ಕೋರೆ ಹಲ್ಲುಗಳಿರುವುದಿಲ್ಲ.  ದವಡೆಯಲ್ಲಿರುವ ಮುಂದವಡೆ (ಪ್ರೀಮೋಲಾರ್) ಮತ್ತು ದವಡೆ (ಮೋಲಾರ್) ಹಲ್ಲುಗಳು ಚಿಕ್ಕವಾಗಿ ನಶಿಸಿಹೋದಂತಿವೆ.  ಇವುಗಳ ಮೇಲೆ ಹಲ್ಲುಗಾಜಿನ (ಎನ್ಯಾಮೆಲ್) ಕವಚವಿಲ್ಲ.  ಮರದ ಸ್ಲಾತುಗಳಲ್ಲಿ ಮೇಲುದವಡೆಯ ಮುಂದವಡೆಯ ಮೊದಲನೆಯ ಹಲ್ಲು ಕೋರೆಯಂತೆ ಹೊರಚಾಚಿಕೊಂಡಿದೆ.  ಆದರೆ ಈ ಕೋರೆ ನೆಲದ ಮೇಲೆ ವಾಸಿಸುವ ಸ್ಲಾತುಗಳಲ್ಲಿರಬಹುದು ಅಥವಾ ಇಲ್ಲದಿರಬಹುದು.

	ಗತಕಾಲದಲ್ಲಿ ಬದುಕಿದ್ದ ಈಡೆಂಟೇಟಗಳಿಗೆ ಪೇಲಿಯನೋಡೆಂಟೇಟವೆಂದು ಹೆಸರು.  ಇವುಗಳ ಚರಿತ್ರೆ ಆಲಿಗೊಸೀನ್ ಮಧ್ಯಭಾಗದಲ್ಲಿ ಪ್ರಾರಂಭವಾಗುತ್ತದೆ.   ಉತ್ತರ ಅಮೆರಿಕದಲ್ಲಿ ಇವುಗಳ ಉದಯ  60 ದಶಲಕ್ಷ ವರ್ಷಗಳ ಹಿಂದೆ ಆಯಿತು.  ಆ ಕಾಲದಲ್ಲಿ ಬದುಕಿದ್ದ ಜಾತಿಗಳೆಂದರೆ ಪೇಲಿಯಾನ್‍ಡಾನ್ ಮತ್ತು ಮೆಟಖೈರೊಮಿಸ್. ಇವು ಕನಿಷ್ಠ ದರ್ಜೆಯ ಈಡೆಂಟೇಟಗಳು.					(ನೋಡಿ- ಆರ್ಮಡಿಲ್ಲೊ)
	(ಎಸ್.ಎನ್.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ